ಕೋಲ್ಕೊತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕೊತಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಮಹಿಳಾ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಹಿಳಾ ವೈದ್ಯೆಯ ಹತ್ಯೆಗೂ ಮುನ್ನವೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಮಾಹಿತಿಯು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಇದರ ಬೆನ್ನಲ್ಲೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಈ ಆರೋಪಿಯ ಬಂಧನಕ್ಕೆ ಕಾರಣವಾಗಿದ್ದು ಒಂದು ಬ್ಲ್ಯೂಟೂತ್ ಹೆಡ್‌ಸೆಟ್ ಎಂಬುದು ಗಮನಾರ್ಹ ಸಂಗತಿಯಾಗಿದೆ.
ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ 31 ವರ್ಷದ ಮಹಿಳೆಯು ಕಳೆದ ಗುರುವಾರ (ಆಗಸ್ಟ್ 8) ಆರ್ ಕೆ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಅಧ್ಯಯನ ಮಾಡಲು ಹೋಗಿದ್ದ ಹತ್ಯೆಗೀಡಾಗಿದ್ದರು. ಶುಕ್ರವಾರ ಬೆಳಗ್ಗೆ ಮಹಿಳಾ ವೈದ್ಯೆಯ ಶವವು ಅರೆಬೆತ್ತಲೆ ಪತ್ತೆಯಾಗಿದೆ. ಶವ ಪತ್ತೆಯಾದ ಜಾಗದಲ್ಲಿ ಬ್ಲ್ಯೂಟೂತ್ ಹೆಡ್‌ಫೋನ್ ಒಂದು ಪತ್ತೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.