ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆನ್ನಿನ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದುಕೊಂಡಿರುವ ನಟ ದರ್ಶನ್ ಅವರ ಜಾಮೀನಿನ ಭವಿಷ್ಯ ಇಂದು ಹೈಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.
ಬೆನ್ನು ನೋವಿನ ಕಾರಣ ತಿಳಿಸಿ ಅನುಕಂಪದ ಆಧಾರದ ಮೇಲೆ ನಟ ದರ್ಶನ್ 6 ವಾರಗಳ ಕಾಲ ಜಾಮೀನು ಪಡೆದಿದ್ದರು. ಇನ್ನೇನು ಎರಡು ದಿನದಲ್ಲಿ ಮಧ್ಯಂತರ ಜಾಮೀನು ಅವಧಿ ಮುಕ್ತಾಯಗೊಳ್ಳಲಿದ್ದು, ಇದುವರೆಗೂ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ.
ಹಾಗಾಗಿ ಇಂದು ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗದ್ದಕ್ಕೆ ಸೂಕ್ತ ಕಾರಣ ತಿಳಿಸದಿದ್ದರೆ ಅವರ ಜಾಮೀನು ರದ್ದಾಗಲಿದೆ ಎಂದು ಪೀಠವು ತಿಳಿಸಿದೆ.
ನಟ ದರ್ಶನ್ ಈಗಲೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಸೆಂಬರ್ 11ಕ್ಕೆ ಅವರ ಮಧ್ಯಂತರ ಜಾಮೀನು ಅವಧಿ ಅಂತ್ಯವಾಗಲಿದೆ. ಒಂದು ವೇಳೆ ಇಂದು ಜಾಮೀನು ಸಿಗದಿದ್ದರೆ, ಮತ್ತೆ ಮಧ್ಯಂತರ ಜಾಮೀನು ವಿಸ್ತರಣೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.