ಚೆನ್ನೈ: ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕ ಪಕ್ಕದ ಮನೆಯ ವಾಷಿಂಗ್ ಮಷಿನ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.
ರಾಧಾಪುರಂ ನಿವಾಸಿಯಾಗಿರುವ ವಿಘ್ನೇಶ್ ಹಾಗೂ ರಮ್ಯಾ ದಂಪತಿಯ ಪುತ್ರ ಸಂಜಯ್ ಮೃತ ಬಾಲಕ. ಆತ ಸೋಮವಾರ ಬೆಳಗ್ಗೆ ಶಾಲೆಗೆ ರೆಡಿಯಾಗಿ ನೆರೆ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದನು. ತಾಯಿ ಮನೆ ಕೆಲಸಗಳನ್ನು ಮುಗಿಸಿಕೊಂಡು ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಲು ಹೊರ ಬಂದಾಗ ಬಾಲಕ ಅಲ್ಲಿ ಇರಲಿಲ್ಲ.
ಗಾಬರಿಗೊಂಡ ಮಹಿಳೆ ಪತಿಗೆ ಕರೆ ಮಾಡಿ ತಿಳಿಸಿದ್ದಾಳೆ. ಬಳಿಕ ದಂಪತಿ ಎಲ್ಲೆಡೆ ಹುಡುಕಾಡಿದರೂ ಬಾಲಕ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ನಂತರ ಪೋಷಕರು ಹತ್ತಿರದ ಪೊಲೀಸ್ ಠಾಣೆಗೆ ಧಾವಿಸಿ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಕೇಳಿದಾಗ ಪಕ್ಕದ ಮನೆಯ ತಂಕಮ್ಮಳ ಬಗ್ಗೆ ಸಂಶಯ ಇರುವುದಾಗಿ ದಂಪತಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಂಕಮ್ಮಳ ಬಳಿ ವಿಚಾರಿಸಿದ್ದಾರೆ. ಈ ವೇಳೆ ತಂಕಮ್ಮ ತನಗೆ ಏನೂ ಗೊತ್ತಿಲ್ಲ ಎನ್ನುವ ರೀತಿ ನಟಿಸಿದ್ದಾಳೆ. ಬಳಿಕ ಪೊಲೀಸರು ಆಕೆಯ ಮನೆಯ ಒಳಗೆ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈ ವೇಳೆ ತಂಕಮ್ಮ ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಪೊಲೀಸರು ಕೂಲಂಕುಷವಾಗಿ ಹುಡುಕಾಟ ನಡೆಸಿದಾಗ ವಾಷಿಂಗ್ ಮಷಿನ್ ಒಳಗೆ ಬಟ್ಟೆಗಳಿಂದ ಸುತ್ತಿದ ರೀತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ತಕ್ಷಣ ಪೊಲೀಸರು ತಂಕಮ್ಮನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆಗೆ ಕಾರಣ ಏನು ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ವಿಘ್ನೇಶ್-ರಮ್ಯಾ ದಂಪತಿ ಹಾಗೂ ತಂಕಮ್ಮ ಕುಟುಂಬದ ನಡುವೆ ಈ ಹಿಂದೆ ಜಾಗದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಅಲ್ಲದೆ ತಂಕಮ್ಮಳ ಪುತ್ರ ಇತ್ತೀಚೆಗೆ ನಿಧನ ಹೊಂದಿದ್ದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.