ಕಾಸರಗೋಡು : ಒಂದೂವರೆ ವರ್ಷಗಳ ಹಿಂದೆ ಬೇಕಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನಿವಾಸಿ ಭಾರತೀಯ ಉದ್ಯಮಿಯ ಸಾವಿನ ಪ್ರಕರಣ ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.
ಪೂಚಕ್ಕಾಡ್ ನ ಎಂ . ಸಿ ಅಬ್ದುಲ್ ಗಫೂರ್ ಹಾಜಿ (೫೫)ರವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ. ಬಂಧಿತರನ್ನು ಮೇಲ್ಪರಂಬ ಕುಳಿಕುನ್ನುವಿನ ಶಮೀಮಾ ( ೩೮), ಪತಿ ಉಬೈದ್ ( ೪೦) , ಪೂಚಕ್ಕಾಡ್ ನ ಅನ್ಸಿಫಾ ( ೩೪) ಮತ್ತು ಮಧೂರಿನ ಆಯಿಷಾ (೪೦) ಗುರುತಿಸಲಾಗಿದೆ.
ಚಿನ್ನಾಭರಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಚಾರದ ಹೆಸರಲ್ಲಿ ಸುಮಾರು ೫೯೬ ಪವನ್ ಚಿನ್ನಾಭರವನ್ನು ಇವರು ಲಪಾಟಿಯಿಸಿದ್ದರು. ಬಳಿಕ ಚಿನ್ನಾಭರಣವನ್ನು ಗಫೂರ್ ಹಾಜಿ ಮರಳಿಸುವಂತೆ ಕೇಳಿದ್ದು, ಈ ಕಾರಣಕ್ಕಾಗಿ ಕೊಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ.
೨೦೨೩ ರ ಏಪ್ರಿಲ್ ೧೪ ರಂದು ಕೊಲೆ ನಡೆದಿತ್ತು . ಕೃತ್ಯ ನಡೆದ ದಿನ ಗಫೂರ್ ಹಾಜಿ ಮಾತ್ರ ಮನೆಯಲ್ಲಿದ್ದರು. ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ ಬಂದಾಗ ಗಫೂರ್ ಮನೆಯ ಕೊನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅಂದು ಪತ್ತೆಯಾಗಿದ್ದರು. ಅಸಹಜ ಸಾವು ಎಂದು ಪತ್ನಿ , ಮಕ್ಕಳು , ಸಂಬಂಧಿಕರು ನಂಬಿದ್ದರು.
ಇದರಿಂದ ಮೃತದೇಹವನ್ನು ದಫನ ಮಾಡಲಾಗಿತ್ತು. ದಿನಗಳ ಬಳಿಕ ಗಮನಿಸಿದಾಗ ಮನೆಯಿಂದ ೫೯೬ ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ರ ಪುತ್ರ ಅಹಮ್ಮದ್ ಮುಸಾಮ್ಮಿಲ್ ಬೇಕಲ ಠಾಣಾ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು.
ಗಫೂರ್ ಹಾಜಿ ರವರ ಕೊಲೆಯ ಬಳಿಕ ನಾಪತ್ತೆಯಾಗಿರುವ 596 ಪವನ್ ಆಭರಣಗಳ ವಶಕ್ಕೆ ತನಿಖಾ ತಂಡ ಪ್ರಕ್ರಿಯೆ ಆರಂಭಿಸಿದೆ. ಕೆಲವಷ್ಟು ಚಿನ್ನಾಭರಣವನ್ನು ಮೂವರು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿದೆ. ದೂರಿನ ಹಿನ್ನಲೆಯಲ್ಲಿ ಬೇಕಲ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. 2023 ಏಪ್ರಿಲ್ ೨೭ ರಂದು ರಂದು ಗಫೂರ್ ಹಾಜಿ ಅವರ ದೇಹವನ್ನು ಸಮಾಧಿಯಿಂದ ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಾಯವಾಗಿರುವುದು ಕಂಡುಬಂದಿತ್ತು . ಇದರಿಂದ ಕೊಲೆ ಎಂಬುದು ಸ್ಪಷ್ಟಗೊಂಡಿತ್ತು.
ವಾಮಾಚಾರದಲ್ಲಿ ತೊಡಗಿರುವ ಶಮೀಮಾ ಹಾಗೂ ಆಕೆಯ ಉಬೈದ್ ಎರಡನೇ ಪತಿ ಯುವಕನ ಸಾವಿನ ಹಿಂದೆ ಶಂಕೆ ಇದೆ ಎಂದು ಗಫೂರ್ ಅವರ ಪುತ್ರ ಬೇಕಲ ಪೊಲೀಸರು ಹಾಗೂ ಮುಖ್ಯಮಂತ್ರಿಗಳಿಗೆ ನೀಡಿದ ದೂರಿನ ಆಧಾರದ ಮೇಲೆ ವಿಶೇಷ ತಂಡವನ್ನು ರಚಿಸಿತ್ತು .
ತನಿಖಾ ತಂಡವು ಮನೆಯವರು , ಕುಟುಂಬಸ್ಥರು ,ನಾಗರಿಕರು ಹಾಗೂ ಕ್ರಿಯಾ ಸಮಿತಿ ಸೇರಿದಂತೆ ೪೦ ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಿತ್ತು.
ತನಿಖೆ ವೇಳೆ ಶಮೀಮಾಳ ಸಹಚಾರರ ಬ್ಯಾಂಕ್ ಖಾತೆಗೆ ಭಾರಿ ಮೊತ್ತದ ಹಣ ಜಮಾ ಆಗಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ಮೃತ ಗಫೂರ್ ಹಾಜಿ ಮತ್ತು ಶಮಿಮಾಳ ನಡುವೆ ನಡೆದ ವಾಟ್ಸಾಪ್ ಸಂದೇಶಗಳು ಪೊಲೀಸರಿಗೆ ಲಭಿಸಿದೆ.
ಶಮೀಮಾ ಗಫೂರ್ ಹಾಜಿ ರವರಿಂದ ಹಿಂದೆ 10 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಪಡೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದ್ದು , ಹಲವು ಪುರಾವೆಗಳು ಪೊಲೀಸರಿಗೆ ಲಭಿಸಿತ್ತು. ಗಲ್ಫ್‌ನಲ್ಲಿ ಹಲವಾರು ಸೂಪರ್‌ಮಾರ್ಕೆಟ್‌ಗಳು ಮತ್ತು ಇತರ ಉದ್ಯಮಗಳನ್ನು ಹೊಂದಿದ್ದರು.