ಬೆಂಗಳೂರು: ಉದ್ಯಮಿಯೊಬ್ಬರು ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾರಿನಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿರುವಂತಹ ಸ್ಥಿತಿಯಲ್ಲಿ ಉದ್ಯಮಿಯೊಬ್ಬರ ಮೃತದೇಹ ಹತ್ತೆಯಾಗಿರುವ ಘಟನೆ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.
ಪೊಲೀಸರಿಗೆ ವಾಹನವೊಂದು ಹೊತ್ತಿ ಉರಿಯುತ್ತಿರುವ ಕುರಿತು ಕರೆ ಬಂದಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನೊಳಗಿದ್ದ ಪ್ರದೀಪ್ ಎಂಬುವರು ಅದಾಗಲೇ ಮೃತಪಟ್ಟಿದ್ದರು.
ವೃತ್ತಿಯಲ್ಲಿ ಹೋಟೆಲ್ ಸಲಹೆಗಾರರಾದ ಪ್ರದೀಪ್ ಸ್ಕೋಡಾ ಕಾರನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿದ್ದರು. ತನಿಖಾಧಿಕಾರಿಗಳು ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿದೆ. ಪೊಲೀಸರು ಪ್ರದೀಪ್ ಕುಟುಂಬ ಹಾಗೂ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದಾಗ ಘಟನಾ ಸ್ಥಳದಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ. ಹಣಕಾಸು ಅಥವಾ ಇನ್ಯಾವುದೇ ತೊಂದರೆ ಇದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಎಸ್ ಗಿರೀಶ್ ಮಾಹಿತಿ ನಈಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರದೀಪ್ ಅವರೇ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ಪ್ರದೀಪ್ ನಷ್ಟ ಅನುಭವಿಸಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಹೇಳಲಾಗಿದ್ದು, ನಿಖರ ಕಾರಣ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಆತ್ಮಹತ್ಯೆ ಮಾಡಿ ಕೊಳ್ಳಲು ಉದ್ಯಮಿ ಪೆಟ್ರೋಲ್ ಖರೀದಿಸಿ ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದರು ಎಂದು ಹೇಳಲಾಗುತ್ತಿದೆ, ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.