News Karnataka Kannada
Saturday, April 27 2024
ಕ್ಯಾಂಪಸ್

ಸಂಶೋಧನೆಗಳು ಸಮಾಜಕ್ಕೂ ಪ್ರಯೋಜನಕಾರಿಯಾಗಿರಲಿ: ಪ್ರೊ.ವರದೇಶ್ ಹಿರೇಗಂಗೆ

Let the research be beneficial to the society as well: Prof Varadesh Hiregange
Photo Credit : News Kannada

ಉಜಿರೆ: ಸಂಶೋಧನೆಗಳು ಸಂಶೋಧಕರಿಗೆ ಮಾತ್ರವಲ್ಲದೆ  ಸಮಾಜಕ್ಕೂ ಪ್ರಯೋಜನಕಾರಿಯಾಗಿರಬೇಕು ಎಂದು ಮಾಹೆ (ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್)ಯ ಗಾಂಧಿಯನ್‌ ಸೆಂಟರ್ ಫಾರ್‌ ಫಿಲಾಸಫಿಕಲ್‌ ಆರ್ಟ್ಸ್ ಆ್ಯಂಡ್ ಸೈನ್ಸಸ್‌ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಅಭಿಪ್ರಾಯಪಟ್ಟರು.

ಉಜಿರೆ ಶ್ರೀ  ಧ. ಮಂ.  ಕಾಲೇಜಿನ  ಪತ್ರಿಕೋದ್ಯಮ  ವಿಭಾಗ  ಮತ್ತು  ಪೂರ್ವಿ  ಪ್ರೊಡಕ್ಷನ್ಸ್, ಉಪ್ಪಿನಂಗಡಿ  ಜಂಟಿ ಸಹಯೋಗದಲ್ಲಿ ಕಾಲೇಜಿನ ಸಮ್ಯಗ್ದರ್ಶನ  ಸಭಾಂಗಣದಲ್ಲಿ .1 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಗಾಡ್ಸ್‌ ವೈವ್ಸ್‌ ಮೆನ್ಸ್‌ ಸ್ಲೇವ್ಸ್‌’ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇವದಾಸಿಯರ ಕುರಿತ 78 ನಿಮಿಷಗಳ ಸಾಕ್ಷ್ಯಚಿತ್ರವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ಪುತ್ತೂರಿನ ಮಹಿಳಾ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಪೂರ್ಣಿಮಾ ರವಿ ನಿರ್ಮಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧಕರು ಕೈಗೊಳ್ಳುವ ಸಂಶೋಧನೆಗಳು ಕೇವಲ ಮಹಾಪ್ರಬಂಧಗಳಾಗಿ ಗ್ರಂಥಾಲಯದಲ್ಲಿ ಉಳಿಯುವ ಬದಲು ಸಮಾಜಕ್ಕೆ ಪ್ರಯೋಜನಕಾರಿಯಾಗಿರಬೇಕು. ಈ ನಿಟ್ಟಿನಲ್ಲಿ ಪೂರ್ಣಿಮಾ ರವಿ ಅವರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

“ದೇವದಾಸಿಯರ ನೋವನ್ನು ಅರಿಯುವ ಕೆಲಸವನ್ನು, ಅವರ ಬವಣೆಯನ್ನು ಬೆಳಕಿಗೆ ತರುವ ಪ್ರಯತ್ನವನ್ನು ಪೂರ್ಣಿಮಾ ರವಿ ಸಾಕ್ಷ್ಯಚಿತ್ರದ ಮೂಲಕ ಮಾಡಿದ್ದಾರೆ. ಸಾಮಾನ್ಯವಾಗಿ ಸಂಶೋಧಕರು ಸಿನೆಮಾ ಮಾಡಲು ಹೋಗುವುದಿಲ್ಲ. ಸಿನೆಮಾ ಮಾಡುವವರ ಶೋಧನೆ ಸಂಶೋಧನೆಯ ರೂಪದಲ್ಲಿರುವುದಿಲ್ಲ. ಆದರೆ ಕ್ರಿಯಾ ಸಂಶೋಧನೆಯ ಮೂಲಕ ಸಮಾಜದ ಅನಿಷ್ಟವೊಂದನ್ನು ಬೆಳಕಿಗೆ ತರಲು ಪೂರ್ಣಿಮಾ ಹೊರಟಿದ್ದಾರೆ” ಎಂದು ಅವರು ತಿಳಿಸಿದರು.

“ಪರಂಪರೆ ಮತ್ತು ಆಧುನಿಕತೆಯಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇರುತ್ತವೆ. ಅವುಗಳಲ್ಲಿ ಯಾವುದನ್ನು ಪಡೆಯಬೇಕು,ಯಾವುದನ್ನು ಬಿಡಬೇಕು ಎನ್ನುವುದನ್ನು ಗಾಂಧೀಜಿ ತಿಳಿಸಿದ್ದಾರೆ. ಕಾನೂನಿನಿಂದಲೇ ಎಲ್ಲವನ್ನು ನಿಲ್ಲಿಸಲು ಸಾಧ್ಯವಿಲ್ಲ. ಮನುಷ್ಯ ತನ್ನ ಮನಸ್ಸು ಬದಲಿಸಿಕೊಳ್ಳಬೇಕು. ಬದಲಾವಣೆ ಮೊದಲು ನಮ್ಮಲ್ಲೇ ಉಂಟಾಗಬೇಕು” ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ವಿಶ್ರಾಂತ  ಇತಿಹಾಸ  ಪ್ರಾಧ್ಯಾಪಕ ಡಾ.ಎಚ್‌. ಎಂ. ಚಂದ್ರಶೇಖರ ಶಾಸ್ತ್ರಿ ಅವರು ಮಾತನಾಡಿ,  “ಹೆಣ್ಣಾಗಿ ಹೆಣ್ಣಿನ ಭಾವನೆಯನ್ನು ತಿಳಿಯುವ ಕಾರ್ಯವನ್ನು ಪೂರ್ಣಿಮಾ ಮಾಡಿದ್ದಾರೆ. ಬಳ್ಳಾರಿಯಲ್ಲಿ ದೇವದಾಸಿ  ಪದ್ಧತಿಯನ್ನು ಈಗಲೂ ಕಾಣಲು ಸಾಧ್ಯ. ಇದಕ್ಕೆ ಮೂಢನಂಬಿಕೆಗಳೆ ಕಾರಣ. ವಿಜ್ಞಾನ ಮುಂದುವರಿದ ಹಾಗೆ ಮನುಷ್ಯ ಮನುಷ್ಯನ ನಡುವಿನ ಅಂತರ ಹೆಚ್ಚಾಗುತ್ತಿದೆ. ಇತ್ತೀಚೆಗೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಹೆಣ್ಣಿಗೆ ಅಧ್ಯಯನ, ಅಧ್ಯಾಪನ  ಎಲ್ಲವೂ  ಸಿಕ್ಕಿದೆ. ಆದರೆ, ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ದೊರೆಯುತ್ತಿಲ್ಲ” ಎಂದರು.

ಇನ್ನೋರ್ವ ಅತಿಥಿ, ಕನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ ಅವರು ಮಾತನಾಡಿ, “ದೇವದಾಸಿ  ಪದ್ಧತಿಗೆ  ಅನಕ್ಷರತೆ,  ಅಸ್ಪೃಶ್ಯತೆಗಳೇ  ಕಾರಣ.  ಸಂಘಟನೆಗಳು  ಇಂತಹ ಶೋಷಣೆಗಳನ್ನು ವಿರೋಧಿಸುವ ಮೂಲಕ ಹೋರಾಟ ನಡೆಸುತ್ತಿವೆ. ಸರಕಾರ ಕೇವಲ ಮೂವತ್ತೈದು  ವರ್ಷ  ಮೇಲ್ಪಟ್ಟ  ನಲವತ್ತು ಸಾವಿರ ದೇವದಾಸಿಯರನ್ನು ಗುರುತಿಸಿ  ಪಿಂಚಣಿ  ನೀಡುತ್ತಿದೆ.  ಆದರೆ,  ಉಳಿದ  ದೇವದಾಸಿಯರಿಗೂ ಮಾಸಿಕ ಪಿಂಚಣಿ ದೊರಕಿಸುವತ್ತ ಸರಕಾರ ಗಮನಹರಿಸಬೇಕು” ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಿವಿಧ ರೀತಿಯಲ್ಲಿ ನೆರವಾದ ಸ್ವರ್ಣಶ್ರೀ ಪಟ್ಟೆ,  ಸಿಂಧೂ ಹೆಗ್ಡೆ,  ಆಶಿಶ್‌ ಯಾದವ್‌,  ಚಂದ್ರಶೇಖರ್‌ ಹೆಗಡೆ,  ಪ್ರವೀಣ್‌ ವರ್ಣಕುಟೀರ, ಮಾಲತೇಶ್‌, ಶ್ರೀನಿವಾಸ್‌, ಸುನೀತಾ ಪ್ರವೀಣ್‌, ಅನನ್ಯ ಸಿ., ಪ್ರಸನ್ನ ರೈ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಸ್ವಾಗತಿಸಿ, ಸಾಕ್ಷ್ಯಚಿತ್ರ ನಿರ್ಮಾಪಕಿ ಪೂರ್ಣಿಮಾ ರವಿ  ವಂದಿಸಿದರು. ಡಾ. ಗೋವಿಂದ ಪ್ರಸಾದ್‌ ಕಜೆ ಕಾರ್ಯಕ್ರಮ ನಿರೂಪಿಸಿದರು. ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು