ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಮೂಲಕ ತೆರಿಗೆ ಪಾವತಿಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್‌ನ್ಯೂಸ್ ನೀಡಿದೆ. ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟು ಮಾಡಲು ಸಹಾಯಕರವಾಗಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ.
ಡೆಲಿಗೇಟೆಡ್ ಪೇಮೆಂಟ್ಸ್ ವಿಧಾನ
ಇದರ ಜತೆಗೆ ಆರ್‌ಬಿಐ ‘ಡೆಲಿಗೇಟೆಡ್ ಪೇಮೆಂಟ್ಸ್’ ಎಂಬ ಹೊಸ ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಫೀಚರ್ ಇದಾಗಿದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮಿತಿಯವರೆಗೆ ಯುಪಿಐ ವಹಿವಾಟುಗಳನ್ನು ನಡೆಸಲು ದ್ವಿತೀಯ ಬಳಕೆದಾರನಿಗೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ ಪ್ರತ್ಯೇಕ ಯುಪಿಐ-ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಗಮಗೊಳಿಸಲಿದೆ. ಆದರೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.