ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ಕಂಪನಿ ರಿಲಯನ್ಸ್ ಇಂಡಸ್ಟ್ರಿ ಸಹ ಒಂದು ವರ್ಷದಲ್ಲಿ 42 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಮೂಲಕ ಕಂಪನಿ ತನ್ನ ವೆಚ್ಚವನ್ನು ಕಡಿತಗೊಳಿಸಿದೆ. ಉದ್ಯೋಗಿಗಳನ್ನು ಕಡಿತಗೊಳಿಸಿರುವ ಮಾಹಿತಿಯನ್ನು ತನ್ನ ವಾರ್ಷಿಕ ಜನರಲ್ ರಿಪೋರ್ಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಈ ರಿಪೋರ್ಟ್ ಪ್ರಕಾರ, ಆರ್ಥಿಕ ವರ್ಷ 2023ರ ವೇಳೆ ಕಂಪನಿಯಲ್ಲಿ 3,89,000 ಉದ್ಯೋಗಿಗಳಿದ್ದರು. 2024ರಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.11ರಷ್ಟು ಕಡಿತಗೊಂಡಿದ್ದು, ಸದ್ಯ 3,47,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 42 ಸಾವಿರ ಉದ್ಯೋಗಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಡಿತಗೊಳಿಸಿದೆ. ರಿಲಯನ್ಸ್ ರಿಟೇಲ್‌ನಲ್ಲಿ ಹೆಚ್ಚು ಜಾಬ್ ಕಡಿತಗೊಂಡಿವೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹೊಸ ಉದ್ಯೋಗಿಗಳ ನೇಮಕಾತಿಯಲ್ಲಿ ಮೂರನೇ ಒಂದು ಭಾಗದಷ್ಟು ಅಂದ್ರೆ 1,70,000ರಷ್ಟು ಕಡಿತಗೊಳಿಸಲಾಗಿದೆ. ಅದರಲ್ಲಿಯೂ ವಿಶೇಷವಾಗಿ ರಿಟೇಲ್ ಉದ್ಯಮದಲ್ಲಿ ಕೆಲಸದ ಕಡಿತ ಅಧಿಕವಾಗಿದೆ. ರಿಟೇಲ್ ವಿಭಾಗದಲ್ಲಿ ಕಳೆದ ಹಣಕಾಸಿನ ವರ್ಷದ ಶೇ.60ರಷ್ಟು ಉದ್ಯೋಗಿಗಳು ಅಂದ್ರೆ 2,07,000 ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ 2,45,000 ಆಗಿತ್ತು. ಇನ್ನು ಜಿಯೋದಲ್ಲಿ 95 ಸಾವಿರದಿಂದ 90 ಸಾವಿರಕ್ಕೆ ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಅಂದ್ರೆ 2024ರಲ್ಲಿ ನಮ್ಮಲ್ಲಿ ಕೆಲಸ ತೊರೆಯುವವರ ಸಂಖ್ಯೆ ಇಳಿಮುಖ ಕಂಡಿದೆ ಎಂದು ರಿಲಯನ್ಸ್ ಹೇಳಿಕೆ ಬಿಡುಗಡೆ ಮಾಡಿದೆ.