ಬೆಂಗಳೂರು: ಮೈಸೂರು ಸಿಲ್ಕ್ ಸೀರೆ ಎಂದರೆ ಮಹಿಳೆಯರು ಯಾರು ಇಷ್ಟ ಪಡಲ್ಲ ಹೇಳಿ. ಹಬ್ಬ-ಹರಿದಿನಗಳು ಸೇರಿದಂತೆ ಇತರೆ ವಿಶೇಷ ದಿನಗಳಲ್ಲಿ ಮಹಿಳೆಯರು ಈ ಸೀರೆಯನ್ನು ಧರಿಸಿದರೆ ಏನೋ ಒಂಥಾರ ಹೆಮ್ಮೆ ಪಡುತ್ತಾರೆ. ಆದರೆ ಈಗೀಗ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ (ಕೆಎಸ್ಐಸಿ) ಮಳಿಗೆಗಳಲ್ಲಿ ಈ ಸೀರೆಗಳು ಸಿಗುತ್ತಿಲ್ಲದ ಕಾರಣ ಕೆಎಸ್ಐಸಿ ಅಂಗಡಿಗಳಿಗೆ ಮಹಿಳೆಯರು ನುಗ್ಗುತ್ತಿದ್ದಾರೆ.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ ಅಂಗಡಿಗಳು ಮಹಿಳೆಯರಿಗೆ ಸರಿಯಾಗಿ ಸೀರೆಗಳನ್ನು ಪೂರೈಸಲು ಆಗದೇ ಹೈರಾಣಾಗಿವೆ. ಬೇಡಿಕೆಗೆ ತಕ್ಕಂತೆ ಭಿನ್ನ ವಿಭಿನ್ನವಾದ ಬಣ್ಣ ಬಣ್ಣದ ಸೀರೆಗಳು ಪೂರೈಕೆಯಾಗುತ್ತಿಲ್ಲ. ಇದರಿಂದ ಹಣ ಕೊಟ್ಟರು ಪರಂಪರೆಯ ಮೈಸೂರು ಸಿಲ್ಕ್ ಸೀರೆ ಸಿಗದೆ ಮಹಿಳೆಯರು ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಆಗುತ್ತಿಲ್ಲ. ಕೆಎಸ್ಐಸಿ ಕೇವಲ ವಾರಕ್ಕೊಮ್ಮೆ ಅಂದರೆ ಶನಿವಾರ ಮಾತ್ರ ಅಂಗಡಿ ತೆರೆಯುತ್ತಾರೆ. ಹೀಗಾಗಿ ಮಹಿಳೆಯರು ತಿಂಗಳುಗಟ್ಟಲೇ ಕಾದರು ಸೀರೆ ಸಿಗುತ್ತಿಲ್ಲ. ಮದುವೆ, ಹಬ್ಬ ಸೇರಿದಂತೆ ವಿಶೇಷ ದಿನಗಳಲ್ಲಿ ಧರಿಸಬೇಕು ಎಂದರೆ ಮೈಸೂರು ಸೀರೆ ಇನ್ನಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ. ಹೀಗಾಗಿ ಕೆಎಸ್ಐಸಿ ಹೆಚ್ಚಿನ ಪಾಳಿಯಲ್ಲಿ ಕೆಲಸ ಮಾಡಲು ಪ್ಲಾನ್ ಮಾಡಿದೆ.
ಇನ್ನು ಮೈಸೂರು ಸಿಲ್ಕ್ ಸೀರೆಗಾಗಿ ನಾರಿಯರ ಕ್ಯೂ ವಿಚಾರಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತ (ಕೆಎಸ್ಐಸಿ)ದ ಮಾರ್ಕೆಟಿಂಗ್ ಮ್ಯಾನೇಜರ್ ನವೀನ್ ಡಿ.ಕೆ ಮತನಾಡಿದ್ದಾರೆ. ಒಂದು ವಾರಕ್ಕಾಗುವಷ್ಟು ಶನಿವಾರ ಸ್ಟಾಕ್ ಬರುತ್ತದೆ. ಆದರೆ ಸ್ಟಾಕ್ ಬಂದ ಒಂದೆರಡು ಗಂಟೆಯಲ್ಲೇ ಸೀರೆಗಳೆಲ್ಲ ಖಾಲಿಯಾಗುತ್ತಿವೆ. ಇದರಿಂದಾಗಿ ಮಹಿಳೆಯರು ಅಂಗಡಿ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಕೆಲವು ಮಹಿಳೆಯರು ಸೀರೆ ಸಿಗದೇ ವಾಪಸ್ ಹೋಗುತ್ತಿದ್ದಾರೆ. ಇನ್ನಷ್ಟು ಮಂದಿ ಅವರಿಗೆ ಇಷ್ಟವಾದ ಬಣ್ಣದ, ಇಷ್ಟವಾದ ರೀತಿಯ ಸೀರೆ ಸಿಗದೇ ವಾಪಸ್ ಹೋಗುತ್ತಿದ್ದಾರೆ. ಉತ್ಪಾದನೆ ಮೊದಲಿನಷ್ಟೇ ಮಾಡಲಾಗುತ್ತಿದೆ. ಇದರಲ್ಲಿ ಏನು ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.