ಗಾಂಧಿನಗರ್: ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವೇ ಪ್ರಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಹೇಳಿದ್ದಾರೆ. ನಾಲ್ಕನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆದಾರರ ಸಭೆಯನ್ನು (ರೀ ಇನ್ವೆಸ್ಟ್) ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ ಮೋದಿ, ಭಾರತ ಅಗ್ರಸ್ಥಾನಕ್ಕೆ ಏರುವುದಷ್ಟೇ ಅಲ್ಲ, ಆ ಸ್ಥಾನ ಉಳಿಸಿಕೊಳ್ಳುವುದು ಹೇಗೆ ಎನ್ನುವ ಅಂಶಗಳತ್ತ ಗಮನಿಸಲಾಗುತ್ತಿದೆ ಎಂದಿದ್ದಾರೆ. ಮುಂದಿನ ಸಹಸ್ರ ವರ್ಷಗಳಿಗೆ ಭಾರತದಲ್ಲಿ ಈಗ ತಳಹದಿ ನಿರ್ಮಿಸಲಾಗುತ್ತಿದೆ ಎಂದೂ ಪ್ರಧಾನಿಗಳು ವಿವರಿಸಿದ್ದಾರೆ.
‘ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು 140 ಕೋಟಿ ಜನರು ಪಣತೊಟ್ಟಿದ್ದಾರೆ. ನಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ನಾವು ಈ ದೇಶದ ಕ್ಷಿಪ್ರ ಬೆಳವಣಿಗೆಗೆ ಪ್ರತಿಯೊಂದು ವಲಯ ಮತ್ತು ಅಂಶಗಳಲ್ಲೂ ಪ್ರಯತ್ನ ಮಾಡಿದ್ದೇವೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಮರುಬಳಕೆ ಇಂಧನದ ಬಗ್ಗೆ ಮಾತನಾಡಿದ ಪ್ರಧಾನಿ, ಅಯೋಧ್ಯೆ ಸೇರಿದಂತೆ 17 ಪ್ರದೇಶಗಳನ್ನು ಮಾದರಿ ಸೌರ ನಗರಗಳನ್ನಾಗಿ ಮಾಡಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿರುವುದನ್ನು ಹೇಳಿದ್ದಾರೆ.