ನವದೆಹಲಿ: ಭಾರತದ ಆರ್ಥಿಕತೆ ಬಹಳ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ಮುಂದಿನ ಏಳೆಂಟು ವರ್ಷದೊಳಗೆ ಭಾರತದ ಜಿಡಿಪಿ 10 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ. 2030ರೊಳಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ವರದಿಯೊಂದು ಹೇಳಿದೆ. ಐಡಿಬಿಐ ಕ್ಯಾಪಿಟಲ್ ಸಂಸ್ಥೆಯ ವರದಿ ಪ್ರಕಾರ, ಮುಂದಿನ ಆರು ವರ್ಷದಲ್ಲಿ ಪ್ರತೀ ಒಂದೂವರೆ ವರ್ಷಕ್ಕೆ ದೇಶದ ಜಿಡಿಪಿಗೆ 1 ಟ್ರಿಲಿಯನ್ ಡಾಲರ್ ಸೇರ್ಪಡೆಯಾಗುತ್ತಾ ಹೋಗುತ್ತದಂತೆ. ಈ ಮೂಲಕ ಮುಂದಿನ ಕೆಲ ವರ್ಷಗಳಲ್ಲಿ ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆರಿಕ, ಚೀನಾ ನಂತರದ ಸ್ಥಾನವನ್ನು ಭಾರತ ಪಡೆಯಲಿದೆ. ಜಪಾನ್, ಜರ್ಮನಿಯನ್ನು ಹಿಂದಿಕ್ಕಲಿದೆ.
ಸರ್ಕಾರ ಉತ್ಪಾದನಾ ವಲಯ ಅಥವಾ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗೆ ಸಕಲ ರೀತಿಯಲ್ಲಿ ಬಲವರ್ಧನೆಗೊಳಿಸಲು ಮಾಡುತ್ತಿರುವ ಪ್ರಯತ್ನಗಳು ಜಿಡಿಪಿಯ ಅಗಾಧ ಬೆಳವಣಿಗೆಗೆ ಎಡೆ ಮಾಡಿಕೊಡಲಿವೆ. ಐಡಿಬಿಐ ಕ್ಯಾಪಿಟಲ್ ವರದಿಯಲ್ಲಿ ಈ ಸೆಕ್ಟರ್ ವಹಿಸಲಿರುವ ಮಹತ್ವದ ಪಾತ್ರದ ಕುರಿತು ಬೆಳಕು ಚೆಲ್ಲಿದೆ. ಭಾರತದ ಆರ್ಥಿಕತೆಗೆ ಸಿಗುವ ಹೆಚ್ಚುವರಿ ಕೊಡುಗೆಯಲ್ಲಿ (ಜಿವಿಎ- ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಮ್ಯಾನುಫ್ಯಾಕ್ಚರಿಂಗ್ ವಲಯದ ಕೊಡುಗೆ 32 ಪ್ರತಿಶತದಷ್ಟು ಇರಲಿದೆ.