Ad

ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳಲ್ಲಿ ಭಾರೀ ಕುಸಿತ!

Adani

ಮುಂಬೈ: ಹಿಂಡೆನ್‌ಬರ್ಗ್‌ ರಿಪೋರ್ಟ್‌ ಬೆನ್ನಲ್ಲಿಯೇ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರುಗಳಲ್ಲಿ ಭಾರೀ ಕುಸಿತವಾಗಿದೆ. ಹೌದು. . ಅಮೆರಿಕ ಮೂಲದ ಶಾರ್ಟ್‌ ಶೆಲ್ಲರ್‌ ಹಾಗೂ ಇನ್ವೆಸ್ಟ್‌ಮೆಂಟ್‌ ಕಂಪನಿ ಹಿಂಡೆನ್‌ಬರ್ಗ್‌ ರಿಸರ್ಚ್‌ ಮತ್ತೊಮ್ಮೆ ಅದಾನಿ ಗ್ರೂಪ್‌ನ ಮೇಲೆ ಮುಗಿಬಿದ್ದಿದೆ. ಅದಾನಿ ಗ್ರೂಪ್‌ ಹಾಗೂ ಸೆಬಿ ಚೇರ್ಮನ್‌ ನಡುವೆ ವ್ಯವಹಾರವಿದೆ ಎಂದು ಆರೋಪಿಸಿ ಶನಿವಾರ ತನ್ನ ದಾಖಲೆಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಇಂದು ಅದಾನಿ ಗ್ರೂಪ್‌ನ ಬಹುತೇಕ ಷೇರುಗಳು ಮಾರುಕಟ್ಟೆಯಲ್ಲಿ ಶೇ. 7ರಷ್ಟರವರೆಗೆ ಕುಸಿತ ಕಂಡು ಬಳಿಕ ಚೇತರಿಸಿಕೊಂಡಿದೆ. ಆದರೆ, ಷೇರುಗಳ ವಹಿವಾಟು ಅಸ್ಥಿರವಾಗಿ ಮುಂದುವರಿದಿದೆ.

ಅದಾನಿ ಗ್ರೂಪ್‌ನ ಅತ್ಯಂತ ಪ್ರಮುಖ ಷೇರು, ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಸೇರಿದಂತೆ ಕಂಪನಿಯ ಎಲ್ಲಾ ಷೇರುಗಳು ರೆಡ್‌ಜೋನ್‌ನಲ್ಲಿ ವಹಿವಾಟು ನಡೆಸುತ್ತಿದೆ.

ನಿಫ್ಟಿ 50 ಸೂಚ್ಯಂಕದ ಭಾಗವಾಗಿರುವ ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ದಿನದ ಕನಿಷ್ಠ ಮಟ್ಟದಿಂದ ಸ್ವಲ್ಪ ಚೇತರಿಕೆ ಕಾಣುವ ಮೊದಲು 5% ರಷ್ಟು ಕುಸಿದವು. ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ವಿಲ್ಮಾರ್ ಮತ್ತು ಅದಾನಿ ಟೋಟಲ್ ಗ್ಯಾಸ್ ನಂತಹ ಷೇರುಗಳು 5% ಮತ್ತು 7% ನಡುವೆ ಕುಸಿದವು.

ಅದಾನಿ ಗ್ರೂಪ್‌ನ ಇನ್ವೆಸ್ಟ್‌ಮೆಂಟ್‌ ಫಂಡ್‌ಗೆ ಸಂಬಂಧಿಸಿದ ಆರೋಪಗಳ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ. ಆದರೆ, ಈ ಫಂಡ್‌ಗಳಲ್ಲಿ ಸೆಬಿ ಚೇರ್ಮನ್‌ ಮಾಧಾಬಿ ಪೂರಿ ಬಚ್‌ ಅವರ ಹೂಡಿಕೆ ಕೂಡ ಇದೆ. ಇದು ಸ್ವ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಹಿಂಡೆನ್‌ಬರ್ಗ್‌ ರಿಸರ್ಚ್‌ ತನ್ನ ಶನಿವಾರದ ವರದಿಯಲ್ಲಿ ಆರೋಪ ಮಾಡಿತ್ತು. ಇದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ ಸೆಬಿ ಚೇರ್ಮನ್‌ ಇದೊಂದು ಆಧಾರರಹಿತ ಆರೋಪ ಎಂದಿದ್ದಲ್ಲದೆ, ನನ್ನ ವರ್ಚಸ್ಸನ್ನು ಹಾಳು ಮಾಡುವ ಪ್ರಯತ್ನವಾಗಿ ಮಾತ್ರವೇ ಇದು ಕಾಣುತ್ತಿದೆ ಎಂದು ತಿಳಿಸಿದ್ದರು.

Ad
Ad
Nk Channel Final 21 09 2023