ನವದೆಹಲಿ: ಅಮೇರಿಕಾದ ಶೇರು ಮಾರುಕಟ್ಟೆಯ ಶಾರ್ಟ್ ಸೆಲ್ಲರ್ ಕಂಪೆನಿ ಹಿಂಡೆನ್‌ಬರ್ಗ್ ಇದೀಗ ಸೆಬಿ ಅಧ್ಯಕ್ಷೆ ವಿರುದ್ದ ದೊಡ್ಡ ಆರೋಪ ಮಾಡಿದ್ದು, ಅದರ ಬೆನ್ನಲ್ಲೇ ಸೆಬಿ ತನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿದೆ.
ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ. ಈ ನಡುವೆ ಹಿಂಡೆನ್‌ಬರ್ಗ್ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ನಿರಾಕರಿಸಿದ್ದಾರೆ.
ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತವಾಗಿವೆ ಎಂದಿರುವ ಮಾಧವಿ ಬುಚ್ ಮತ್ತು ಧವಲ್ ಬುಚ್, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಪ್ರತಿಪಾದಿಸಿದ್ದಾರೆ. ಆರೋಪ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿಗಳು, ಸೆಬಿಯಿಂದ ಕ್ರಮ ಎದುರಿಸುತ್ತಿರುವ ಹಾಗೂ ಶೋಕಾಸ್ ನೋಟಿಸ್ ಪಡೆದಿರುವ ಹಿಂಡೆನ್‌ಬರ್ಗ್, ಅದಕ್ಕೆ ಪ್ರತಿಯಾಗಿ ಚಾರಿತ್ರ್ಯ ಹರಣಕ್ಕೆ ಯತ್ನಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಈ ನಡುವೆ ಆರೋಪ ಬೆನ್ನಲ್ಲೇ ಸೆಬಿಯ ಅಧಿಕೃತ ಎಕ್ಸ್ ಖಾತೆ ಲಾಕ್ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.