ಹೊಸದಿಲ್ಲಿ: ಅಮೆರಿಕಾ ಮೂಲದ ಕಿರು ಅವಧಿಯ ಮಾರಾಟ ಕಂಪನಿ ಹಿಂಡೆನ್ ಬರ್ಗ್ ರಿಸರ್ಚ್ ನ ಆರೋಪವನ್ನು ರವಿವಾರ ಅದಾನಿ ಸಮೂಹವು ಬಲವಾಗಿ ತಳ್ಳಿ ಹಾಕಿದೆ. ಈ ಆರೋಪವು ಹತಾಶ ಸಂಸ್ಥೆಯೊಂದು ಎರಚಿರುವ ಕೆಸರಾಗಿದ್ದು, ಇದು ಭಾರತೀಯ ಕಾನೂನುಗಳ ಸಂಪೂರ್ಣ ನಿಂದನೆಯಾಗಿದೆ” ಎಂದು ಅದಾನಿ ಸಮೂಹ ಬಣ್ಣಿಸಿದೆ.
ಇತ್ತೀಚಿನ ಹಿಂಡೆನ್ ಬರ್ಗ್ ವರದಿಯಲ್ಲಿ ಸೆಬಿಯ ಮುಖ್ಯಸ್ಥೆ ಮಾಧಬಿ ಬುಚ್ ಹಾಗೂ ಅವರ ಪತಿಯು ಅದಾನಿಯವರ ಸಾಗರೋತ್ತರ ನಿಧಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅದಾನಿ ಸಮೂಹವು, “ಈ ವರದಿಯು ಸಾರ್ವಜನಿಕವಾಗಿ ಲಭ್ಯವಿರುವ ಆಯ್ದ ಮಾಹಿತಿಯನ್ನು ದುರುದ್ದೇಶಪೂರಿತ, ಕುಚೇಷ್ಟೆ ಹಾಗೂ ತಿರುಚುವಿಕೆ ಮೂಲಕ ವೈಯಕ್ತಿಕ ಲಾಭ ಗಳಿಸುವ ಉದ್ದೇಶದಿಂದ ಕೂಡಿದೆ. ಇದು ವಾಸ್ತವಾಂಶಗಳು ಹಾಗೂ ಕಾನೂನಿಗೆ ತೋರಿರುವ ಅಗೌರವವವಾಗಿದೆ” ಎಂದು ಹೇಳಿದೆ. ಈಗಾಗಲೇ ಆಳವಾಗಿ ತನಿಖೆಗೊಳಪಡಿಸಿ, ನಿರಾಧಾರ ಎಂದು ಸಾಬೀತಾಗಿರುವ ಹಾಗೂ ಜನವರಿ 2024ರಲ್ಲಿ ಸುಪ್ರೀಂ ಕೋರ್ಟ್ ನಿಂದಲೂ ಈಗಾಗಲೇ ವಜಾಗೊಂಡಿರುವ ವಿಶ್ವಾದಸಾರ್ಹವಲ್ಲದ ಪ್ರತಿಪಾದನೆಗಳನ್ನು ಪುನರಾವರ್ತಿಸಲಾಗುತ್ತಿದ್ದು, ಈ ಆರೋಪಗಳನ್ನು ಅದಾನಿ ಸಮೂಹವು ಸಂಪೂರ್ಣವಾಗಿ ನಿರಾಕರಿಸುತ್ತದೆ ಎಂದೂ ಹೇಳಿದೆ.